ವಿಳಂಬ ದಂಡ - 
	ಹಡಗನ್ನು ಬಾಡಿಗೆಗೆ ತೆಗದುಕೊಂಡಿರುವವನು ನಿಯತಕಾಲದ ಒಳಗಾಗಿ ಹಡಗಿಗೆ ಸರಕನ್ನು ತುಂಬದೆಯೊ ಹಡಗಿನಿಂದ ಸರಕನ್ನು ಇಳಿಸದೆಯೋ ಹೋದುದಕ್ಕಾಗಿ, ತೆರಬೇಕಾದ ದಂಡ (ಡಿಮರಿಜ್). ಇದಕ್ಕೆ ಸುಸ್ತಿಸುಂಕ ಅಥವಾ ತಡವು ದಂಡ ಎಂತಲೂ ಕರೆಯುವರು.

	ಹಡಗನ್ನು ಬಾಡಿಗೆಗೆ ತೆಗೆದುಕೊಂಡಿರುವವನು ಹಡಗಿನ ಮಾಲೀಕ ರೊಡನೆ, ಸರಕು ಸಾರಿಗೆ ಕರಾರು ಪತ್ರ (ಚಾರ್ಟರ್ ಪಾರ್ಟಿ ಅಗ್ರೀಮೆಂಟ್) ಮಾಡಿಕೊಂಡಿರುತ್ತಾನೆ. ಈ ಕರಾರು ಪತ್ರದಲ್ಲಿ ಎಷ್ಟು ನಿರ್ದಿಷ್ಟ ಕಾಲದವರೆಗೆ ಹಡಗನ್ನು ಉಪಯೋಗಿಸಿ, ಸರಕನ್ನು ಇಳಿಸಲು ಅಥವಾ ತುಂಬಲು ಉಪಯೋಗಿಸಿಕೊಳ್ಳಬಹುದು ಎಂಬುದು ಕರಾರಾಗಿರುತ್ತದೆ. ಸರಕು ಸಾರಿಗೆ ಕರಾರುಪತ್ರದ ಅವಧಿಗಿಂತ ಹೆಚ್ಚುಕಾಲ ಹಡಗನ್ನು ನಿಲ್ಲಿಸಿಕೊಂಡಲ್ಲಿ ಅಥವಾ ಉಪಯೋಗಿಸಿಕೊಂಡಲ್ಲಿ, ಈ ವಿಳಂಬ ದಂಡವನ್ನು ಹಡಗಿನ ಮಾಲೀಕನಿಗೆ ತೆರಬೇಕಾಗುತ್ತದೆ. ಹಡಗಿನ ಮಾಲೀಕನ ತಪ್ಪಿನಿಂದಾಗಿ, ಹಡಗನ್ನು ಹೆಚ್ಚು ಕಾಲ ನಿಲ್ಲಿಸಿಕೊಂಡ ಪಕ್ಷದಲ್ಲಿ, ವಿಳಂಬ ದಂಡ ನೀಡಬೇಕಾಗಿಲ್ಲ. ವಿಳಂಬ ದಂಡಕ್ಕೆ ವ್ಯತಿರಿಕ್ತ ವಾಗಿ, ಸರಕು ಸಾಗಣೆಯ ಬಾಡಿಗೆಯ ಜೊತೆಗೆ ಕೊಡುವ ಸೇಕಡ ಹೆಚ್ಚು ಮೊತ್ತವನ್ನು ಅಧಿಕ ಬಾಡಿಗೆ(ಪ್ರಿಮೇಜ್) ಎಂದು ಕರೆಯುವರು. ರೈಲು, ಲಾರಿ ಮುಂತಾದ ಇತರ ಸಾರಿಗೆ ಸಾಧನಗಳ ವಿಚಾರದಲ್ಲೂ ಈ ತರಹದ ವಿಳಂಬ ದಂಡದ ವಾಡಿಕೆಯುಂಟು.				
			(ಎಮ್.ಆರ್.ಎಮ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ